ಮೂತ್ರಕೋಶನಾಳ -
ಮೂತ್ರವನ್ನು ಮೂತ್ರಕೋಶದಿಂದ ಹೊರಸಾಗಿಸುವ ಮಾರ್ಗ (ಯೂರಿತ್ರ).  ಇದರ ರಚನೆ ಗಂಡಸರಲ್ಲಿ ಮತ್ತು ಹೆಂಗಸರಲ್ಲಿ ಬೇರೆ ಬೇರೆ.  ಗಂಡಿನಲ್ಲಿ ಈ ನಾಳ ಮೂತ್ರಕೋಶದ್ವಾರದಿಂದ ಶಿಶ್ನಾಗ್ರದಲ್ಲಿರುವ ದ್ವಾರದವರೆಗಿದೆ.  ಇದರಲ್ಲಿ ಮೂತ್ರವೇ ಅಲ್ಲದೆ ಸ್ಖಲನಕಾಲದಲ್ಲಿ ವೀರ್ಯವೂ ಸಾಗುತ್ತದೆ.  ಶಿಶ್ನದ ತಟಸ್ಥ ಸ್ಥಿತಿಯಲ್ಲಿ ಗಂಡು ಮೂತ್ರಕೋಶನಾಳಕ್ಕೆ ಅವಗ್ರಹ ಚಿಹ್ನೆಯಂತೆ ಎರಡು ಬಾಗುಗಳಿರುವುವು.  ಉದ್ದ 17.5-20ಸೆಂಮೀ.  ಕೋಶನಾಳದ ಅಡ್ಡಕೊಯ್ತದಲ್ಲಿ ಅದರ ಆಕಾರ ಅಡ್ಡಗಂಡಿಯಂತಿದ್ದು ಮೇಲಿನ ಕೆಳಗಿನ ಭಿತ್ತಿಗಳು ಒಂದಕ್ಕೊಂದು ಸ್ಪರ್ಶಿಸುತ್ತವೆ.  ಆದರೆ ಶಿಶ್ನಾಗ್ರದಲ್ಲಿರುವ ದ್ವಾರ ಪಕ್ಕಗಳು ಒಟ್ಟಿಗಿರುವ ಹಿಂದು ಮುಂದುಗಂಡಿ.  ಗಂಡಿನ ಕೋಶನಾಳದಲ್ಲಿ ಮೂರುಭಾಗಗಳಿವೆ.  ಪ್ರಾಸ್ಟೇಟ್ ಭಾಗ, ಪೊರೆ ಭಾಗ, ಸ್ಪಂಜುಭಾಗ.

	ಪ್ರಾಸ್ಟೇಟ್ ಭಾಗ : ಮೂತ್ರಕೋಶದಿಂದ ಪ್ರಾಸ್ಟೇಟ್ ಗ್ರಂಥಿಯ ಮೂಲಕ ಇಳಿಯುವ ಕೋಶನಾಳಭಾಗವಿದು.  ಕದಿರಿನಂತೆ ಮಧ್ಯೆ ಅಗಲ ಹೆಚ್ಚು.  ಪೊರೆ ಭಾಗವನ್ನು ಸೇರುವಲ್ಲಿ ಅತಿ ಇಕ್ಕಟ್ಟು.  ಅಡ್ಡಕೊಯ್ತದಲ್ಲಿ ಪ್ರಾಸ್ಟೇಟ್ ಭಾಗ ಕುದುರೆ ಲಾಳದಂತಿದೆ.  ಹಿಂದಿನ ಭಿತ್ತಿಯಲ್ಲಿ ಇಕ್ಕಟ್ಟಾದ ಸುಮಾರು 3 ಮಿಮೀ ಎತ್ತರದ ಒಂದು ಉಬ್ಬು ಉದ್ದಕ್ಕೂ ಇದೆ.  ಇದು ಲೋಳೆಪೊರೆ ಮತ್ತು ಅದರಡಿಯ ಪದರದಿಂದಾದುದು.  ಉಬ್ಬಿನ ಪಕ್ಕಗಳಲ್ಲಿ ಪ್ರಾಸ್ಟೇಟ್ ಗ್ರಂಥಿಯ ನಾಳಗಳ ರಂಧ್ರಗಳಿವೆ.  ಕೆಲವು ನಾಳಗಳೂ ಉಬ್ಬಿನ ಪಕ್ಕಗಳಲ್ಲಿ ಪ್ರಾಸ್ಟೇಟ್ ಗ್ರಂಥಿಯ ನಾಳಗಳ ರಂಧ್ರಗಳಿವೆ.  ಕೆಲವು ನಾಳಗಳು ಉಬ್ಬಿನ ಮೇಲೂ ತೆರೆದುಕೊಳ್ಳುತ್ತವೆ.  ಉಬ್ಬಿನ ಅಡಿಯಲ್ಲಿ ಪುರುಷ ಗರ್ಭಾಶಯ ಮತ್ತು ಬಲ ಎಡ ಸ್ಖಲನನಾಳಗಳಿದ್ದು ಅವುಗಳು ರಂಧ್ರಗಳು ಉಬ್ಬಿನ ಮೇಲೆ ತೆರೆದುಕೊಳ್ಳುತ್ತವೆ.  ಪುರುಷ ಗರ್ಭಾಶಯದ ಉದ್ದ 6 ಮಿಮೀ.  ಇದು ಗಂಡಿನ ಅರ್ಧನಾರೀಶ್ವರತ್ವದ ಸೂಚಿ.

	ಕೋಶನಾಳದ ಪೊರೆಭಾಗ : ಇದು ಕೋಶನಾಳದ ಅತಿಹ್ರಸ್ವ ಮತ್ತು ಅತಿ ಕಮ್ಮಿ ಹಿಗ್ಗಬಲ್ಲ ಭಾಗ, ಹೊರ ಮೂತ್ರದ್ವಾರವನ್ನು ಬಿಟ್ಟರೆ ಅತಿ ಇಕ್ಕಟ್ಟು ಭಾಗ.  ಇದು ಪ್ರಾಸ್ಟೇಟಿನ ತುದಿಯಿಂದ ಶಿಶ್ನದ ಬುಡದವರೆಗೆ ಸಾಗುತ್ತದೆ.

	ಕೋಶನಾಳದ ಸ್ಪಂಜು ಭಾಗ : ಇದು ಕೋಶನಾಳದ ಅತಿ ಉದ್ದ ಭಾಗ.  ಪೊರೆ ಭಾಗದ ಕೊನೆಯಿಂದ ಶಿಶ್ನದ ತುದಿಯಲ್ಲಿರುವ ಹೊರ ಮೂತ್ರದ್ವಾರದವರೆಗೆ 15 ಸೆಂಮೀ ಉದ್ದವಿದೆ.  ಇದರ ವ್ಯಾಸ ಸುಮಾರು 6 ಮಿಮೀ.

	ಹೊರ ಮೂತ್ರದ್ವಾರ : ಮೂತ್ರನಾಳದ ಅತಿ ಇಕ್ಕಟ್ಟು ಭಾಗ.  ಮೂತ್ರ ನಾಳದ, ಅದರಲ್ಲೂ ಶಿಶ್ನಭಾಗದ, ಒಳಮೈಯಲ್ಲಿ ಹಲವು ಮೂತ್ರನಾಳ ಗ್ರಂಥಿಗಳ ರಂಧ್ರಗಳಿವೆ.  ಇವಲ್ಲದೆ ಹಲವು ವಿವಿಧ ಅಳತೆಗಳ ಕಿಸೆಗಳೂ (ಲ್ಯಾಕ್ಯುನ) ಇವೆ.  ಇವು ಹೊರೆ ಮೂತ್ರದ್ವಾರದ ಕಡೆಗೆ ತೆರೆದಿದ್ದು ಕೇತಿಟರ್ ತುದಿ ಸಿಕ್ಕಿಕೊಳ್ಳುವಂತಿವೆ.  ಹೊರ ಮೂತ್ರದ್ವಾರದ ಹಿಂದೆ ಅತಿ ದೊಡ್ಡ ಕಿಸೆ ಇದೆ.  ಕೌಪರ್ ಗ್ರಂಥಿನಾಳಗಳೂ ಪೊರೆಭಾಗದಿಂದ 2.5 ಸೆಂಮೀ ಮುಂದೆ ತೆರೆಯುತ್ತವೆ.

	ಆಗರ್ಭ ದೋಷಗಳು : ಸಾಮಾನ್ಯ ಕೊರತೆ ಎಂದರೆ ಹೆಚ್ಚು ಕಮ್ಮಿ ಹರಕು ಮೂತ್ರನಾಳ.  ನಾಳದ ಮುಂದಿನ ಭಾಗದ ಕೆಳಹರಕು ಹೆಚ್ಚು ಸಾಮಾನ್ಯ.  ಮುಂದೊಗಲುಸೀಳಿ ಹೆಡೆಯಂತಿರುತ್ತದೆ.  ಇದರಿಂದ ತೊಂದರೆ ಇಲ್ಲ.  ಚಿಕಿತ್ಸೆಯೂ ಬೇಕಿಲ್ಲ.  ಅತಿಯಾದ ಊನವೆಂದರೆ ಶಿಶ್ನನಾಳ ವೃಷಣಕೋಶದವರೆಗೆ ಹರಿದಿರುವುದು.  ಶಿಶ್ನದ ಕೆಳಗೆ ದಟ್ಟ ಬಂಧನ ಅಂಗಾಂಶದ ಪಟ್ಟಿ ಇದ್ದು ಶಿಶ್ನದ ನಿಗುರಿಕೆಗೆ ಅಡ್ಡಬರುತ್ತದೆ.  ಈ ಸನ್ನಿವೇಶದಲ್ಲಿ ಮೂತ್ರ ವಿಸರ್ಜನೆ ಕಷ್ಟ ಸಾಧ್ಯವಾಗಿರುತ್ತದೆ.  ಸಂಭೋಗ ಅಸಾಧ್ಯ.  ಶಸ್ತ್ರಚಿಕಿತ್ಸೆ ಸಾಧ್ಯ.  ವೃಷಣಕೋಶದ ಮಧ್ಯ ಹರುಕಿದ್ದರೆ ಕಷ್ಟ.  ಶಿಶ್ನ ಚಿಕ್ಕದಿದ್ದು ವೃಷಣಗಳು ಕೆಳಕ್ಕಿಳಿಯದೆ ಉದರದ ಒಳಗೆ ಇದ್ದರೆ ಹುಡುಗಿಯಂತೆ ಸಾಕಲಾಗಿರುತ್ತದೆ.  ಇಂಥ ವ್ಯಕ್ತಿ ಹುಡುಗಿಯೂ ಅಲ್ಲದೆ ಹುಡುಗನೂ ಅಲ್ಲದೆ ಶಿಖಂಡಿಯಾಗಿರಬಹುದು.

	ಮೂತ್ರಕೋಶನಾಳದ ಮೇಲ್ಗಡೆ ಹರಕು (ಎಪಿಸ್ಟೇಡಿಯಾಸ್) ಹೆಚ್ಚು ಅಪರೂಪ.  ಆ ಮೇಲುಹರಕು ಪೂರ್ತಿಯಾಗಿದ್ದರೆ ಮೂತ್ರಕೋಶದ ಹೊರ ಮಗುಚಿಕೆ (ಎಕ್ಸ್‍ಟ್ರೊಫಿ ಆಫ್ ಬ್ಲಾಡರ್) ಇರುತ್ತದೆ.  ಅದಿಲ್ಲದಿದ್ದರೆ ಮೂತ್ರಕೋಶದ ಪನ್ನಾಲೆ ರಂಧ್ರವಿದ್ದು ಅದರಲ್ಲಿ ಶಿಶ್ನದ ತುದಿ ಇರುತ್ತದೆ.  ಆಗರ್ಭ ಮೂತ್ರ ಕೋಶನಾಶ ಸಂಪೀಡನವೂ (ಕನ್‍ಸ್ಟ್ರಿಕ್ಷನ್) ಇದ್ದರೆ ಮೂತ್ರವಿಸರ್ಜನೆ ಕಷ್ಟತರವಾಗಿರುತ್ತದೆ.

	ಹೆಣ್ಣಿನ ಮೂತ್ರಕೋಶನಾಳ : ಗಂಡಿನಲ್ಲಿ ಮೂತ್ರಕೋಶನಾಳ ಜನನ ಕಾರ್ಯದಲ್ಲೂ ತೊಡಗಿದಂತೆ ಹೆಣ್ಣಿನಲ್ಲಿ ತೊಡಗುವುದಿಲ್ಲ.  ಬದಲು ಇದು ಮೂತ್ರ ವಿಸರ್ಜನೆಗೆ ಮಾತ್ರ ಮೀಸಲಾಗಿದೆ.  ಸ್ತ್ರೀಮೂತ್ರನಾಳ 4 ಸೆಂಮೀ.  ಉದ್ದವಿರುವ ಕಿರಿದಾದ ಪೊರೆನಾಳ.  ಅದು ಮೂತ್ರಕೋಶದ ಕತ್ತಿನ ದ್ವಾರದಿಂದ ಭಗದ ಸೀಳಿನಲ್ಲಿರುವ ಮೂತ್ರದ್ವಾರದವರೆಗಿದೆ ; ನಾಳದ ವ್ಯಾಸ ಸುಮಾರು 6 ಮಿಮೀ.  ಅದರ ಲೋಳೆಪೊರೆ ಉದ್ದ ಮಡಿಕೆಗಳಲ್ಲಿದೆ.  ಹಲವು ಚಿಕ್ಕ ಮೂತ್ರನಾಳ ಗ್ರಂಥಿಗಳು ಮೂತ್ರನಾಳದೊಳಕ್ಕೆ ತೆರೆಯುತ್ತವೆ.  ಲೋಳೆಪೊರೆಯ ಅಡಿಯಲ್ಲಿರುವ ತೆಳು ಸ್ಪಂಜು ನಿಗುರು ಅಂಗಾಂಶದ ಪದರದಲ್ಲಿ ಅಭಿಧಮನಿಗಳ ಜಾಲ ಮತ್ತು ಸೂಕ್ಷ್ಮ ಅಡ್ಡಗೆರೆಗಳಿಲ್ಲದ ನಯ ಸ್ನಾಯುತಂತುಗಳಿವೆ.  ಮೂತ್ರಕೋಶ ನಾಳದ ಲೋಳೆಪೊರೆ ಕೆಳಗೆ ಭಾಗದ ಲೋಳೆಪೊರೆಯೊಡನೆಯೂ ಮೇಲೆ ಮೂತ್ರಕೋಶದ ಲೋಳೆಪೊರೆಯೊಡನೆಯೂ ಏಕವಾಗಿದೆ.  ಹೊರ ಮೂತ್ರದ್ವಾರದ ಸುತ್ತಲೂ ಲೋಳೆ ಗ್ರಂಥಿಗಳಿವೆ.
		                                  (ಎಂ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ